ವಾಣ
	ಪ್ರಾಚೀನ ಭಾರತದ ಮೂರು ಪ್ರಮುಖ ವಾದ್ಯಗಳ ಪೈಕಿ ಒಂದು. ಉಳಿದೆರಡು ವೀಣೆ ಮತ್ತು ವೇಣು. ವಾಣ ಎಂಬ ತಂತೀ ವಾದ್ಯದ ಉಲ್ಲೇಖ ಋಗ್ವೇದದಲ್ಲಿದೆ(ಕ್ರಿ.ಪೂ.ಸು. 1500). ಋಗ್ವೇದದ 9ನೆಯ ಮಂಡಲ 51ನೆಯ ಸೂಕ್ತದ 1ನೆಯ ಋಕ್ಕಿನಲ್ಲಿ ವಾಣ ಎಂಬ ವಾದ್ಯದ ಬಗ್ಗೆ ಉಲ್ಲೇಖವಿದೆ. “ಧಮಂತೋ ವಾಣಂ ಮರುತಃ ಸುದಾನ ವೊ ಮದೇ ಸೋಮಸ್ಯ ರಣಾನಿ ಚಕ್ರಿರೇ” (1-85-10) “ಪ್ರಹಂಸಾಸಃ ಸ್ತøಪಲಂ ಪವಮಾನಂ ಸಖಾಯೋ ದುರ್ಮರ್ಷಿ ಸಾಕಂ ಪ್ರವದಂತೆ ವಾಣಮ್” ಹಾಗೂ “ವಾಣಸ್ಯ ಸಪ್ತಧಾತುರಿಜ್ವನಃ” (7-97-8).

	ವಾಣವನ್ನು ಕುರಿತ ಉಲ್ಲೇಖಗಳು ಅಥರ್ವವೇದದಲ್ಲಿಯೂ (ಕಿ.್ರಪೂ. ಸು. 1000) ಇವೆ. ನೂರು ತಂತಿಗಳಿರುವ ವಾದ್ಯವನ್ನು ಕಾತ್ಯಾಯನ ವಾಣ ಎಂದು ಉಲ್ಲೇಖಿಸುತ್ತಾನೆ. ವಾಣೇನ ಶತತಂತುನಾಂ. ವಾಣೋ ಮಹತೀ ವೀಣಾ ಎನ್ನುತ್ತಾರೆ ಕರ್ಕಾಚಾರ್ಯರು. ಅನಂತರದಲ್ಲಿ ಅದನ್ನು ಕಾತ್ಯಾಯನ ವೀಣೆ ಎಂದು ಕರೆದಿದ್ದಾರೆ. 

	ವಣ ಎಂದರೆ ಶಬ್ದ ಎಂದರ್ಥ. ಇದು ವಣ್ ಎಂಬ ಧಾತುಜನ್ಯ. ಈ ಧಾತುವಿಗೆ ಶಬ್ದ ಎನ್ನುವ ಅರ್ಥದ ಜೊತೆಗೆ ವೇಗ ಹಾಗೂ ಗತಿ ಎನ್ನುವ ಅರ್ಥಗಳೂ ಇವೆ. ಶಬ್ದ ಮತ್ತು ಸ್ವರ ಎರಡನ್ನೂ ವಣ ಸೂಚಿಸುತ್ತದೆ. ಹಾಗೆಯೇ ವೀಣೆ ಕೂಡ. ವಾಣ ಎನ್ನುವುದು ಪ್ರಾಯಶಃ ಅತ್ಯಂತ ಪ್ರಾಚೀನವಾದ ತಂತೀವಾದ್ಯ ಇರಬೇಕು. ತರುವಾಯದ ಎಲ್ಲ ತಂತೀವಾದ್ಯಗಳನ್ನು ಇದನ್ನೇ ಆಧರಿಸಿ ರೂಪಿಸಿದ್ದಾರೆ ಎನ್ನುವುದು ಬಹುತೇಕ ಸಂಗೀತಶಾಸ್ತ್ರಜ್ಞರ ಅಭಿಮತ.  ಒಂದು ತಂತಿಯ ಏಕನಾದವೂ ಸೇರಿದಂತೆ ಲ್ಯೂಟ್, ಜಿûದರ್, ಹಾರ್ಪ್ ಹಾಗೂ ಶತತಂತ್ರೀ ವಾದ್ಯಗಳೆಲ್ಲ ವನ್ನೂ ವಾಣ ಸೂಚಿಸುತ್ತಿತ್ತು ಎನ್ನುವುದು ವಿದ್ವಾಂಸರ ಅಭಿಪ್ರಾಯ. ಪ್ರಾಯಶಃ ಪ್ರಾಚೀನ ಕಾಲದಲ್ಲಿ ಈ ಪದ ವಾದ್ಯಗಳನ್ನು ಸೂಚಿಸಲು ಬಳಸುತ್ತಿದ್ದ ಜಾತಿವಾಚಕವಾಗಿತ್ತೆಂದು ಕಾಣುತ್ತದೆ. ಹಾಗಾಗಿ ಇಂದಿನ ವೀಣೆಯ ಮೂಲವನ್ನು ಇದರಲ್ಲಿ ಕಾಣಬಹುದಾದರೂ ಇಂದು ನಾವು ಕಾಣುವ ಆಧುನಿಕ ಸ್ವರೂಪದ ವೀಣೆ ಅಂದೇ ರೂಪುಗೊಂಡಿತ್ತೆಂದು ಹೇಳುವುದು ಅಸಾಧ್ಯ. ವಾಣ ಅಥವಾ ಶತತಂತ್ರೀವೀಣಾವಾದ್ಯ ಕಾಲಾಂತರದಲ್ಲಿ ಸಂತೂರ್ ಆಗಿ ಮಾರ್ಪಟ್ಟಿತೆಂಬ ಅಭಿಪ್ರಾಯಉಂಟು. ಹಿಂದುಸ್ತಾನಿ ಸಂಗೀತ ಕ್ರಮದಲ್ಲಿ ಸಂತೂರ್ ವಾದ್ಯಕ್ಕೆ ಪ್ರಮುಖ ಸ್ಥಾನವಿದೆ.		
	(ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ